ಪ್ರಭಾವತಿ
ಹಂಸಧ್ವಜನ ಮಗನಾದ ಕೃಷ್ಣಭಕ್ತ ಸುಧನ್ವನ ಹೆಂಡತಿ. ಪಾಂಡವರು ಕಳಿಸಿದ ಯಜ್ಞಾಶ್ವವನ್ನು ತಡೆದು, ಅರ್ಜುನನನೊಡನೆ ಸೆಣಸುವ ನೆವದಲ್ಲಿ ಕೃಷ್ಣದರ್ಶನಕ್ಕಾಗಿ ಕಾತರಿಸಿದ ಸುಧನ್ವ ಯುದ್ಧಕ್ಕೆ ಹೊರಟ ಸಮಯದಲ್ಲಿ ಈಕೆ ಋತುಸ್ನಾತೆಯಾಗಿ ಅವನೆದುರು ಬರುತ್ತಾಳೆ. ಅಂಗಜನ ಜಯಸಿರಿಯೋ ಎಂಬಂತೆ ತನ್ನ ಅಂಗಾಂಗ ಸೌಂದರ್ಯದಿಂದ ಚಂದ್ರಕಾಂತ ಪುತ್ಥಳಿಯಂತೆ ಶೋಭಿಸುತ್ತ ಸಂಪಗೆ ಹೂಗಳಿಂದ ತುಂಬಿದ ಹೊನ್ನ ತಟ್ಟೆಯನ್ನು ಹಿಡಿದು ಬಂದು ತನ್ನ ಸಂತಾನಾಪೇಕ್ಷೆಯನ್ನು ಸಂಕೇತವಾಗಿ ಅವನಿಗೆ ಅರುಹುತ್ತಾಳೆ. ಚಕ್ರಿಗೆ ಅಭಿಮುಖನಾಗಿ ಸಮರಕ್ಕೆ ಹೊರಟವನಿಗೆ ಮುಕ್ತಿಯಲ್ಲದೆ ಬೇರೆ ಜಯವಿಲ್ಲವೆಂದೂ ಪುತ್ರನಿಲ್ಲದವ ಯುದ್ಧಕ್ಕೆ ಹೋಗುವುದು ಯುಕ್ತವಲ್ಲವೆಂದೂ ವಿಶಾಖೆ ತುದಿಗೆ ಬಂದ ಈ ಸಮಯವೇ ಅಂಕುರಾರ್ಪಣಕ್ಕೆ ಯುಕ್ತಕಾಲವೆಂದೂ ತನ್ನ ಎಳೆನಗೆಯೊಂದಿಗೆ ಸವಿನುಡಿಯುತ್ತಾಳೆ. ಸಂತಾನಾಪೇಕ್ಷೆಯಿಂದಾಗಿ ಕಾಮಾತುರಳಾದ ಈಕೆ ಸಹಜ ಲಜ್ಜೆಯನ್ನು ಮೀರಿದ ಶೃಂಗಾರ ಚೇಷ್ಟೆಗಳಿಂದ ಭೇರಿ ಮೊಳಗುವ ಆ ಸಮಯದಲ್ಲಿ ತಾತನಾಜ್ಞೆಯನ್ನು ಮೀರಲಾರದೆ ಸಂದಿಗ್ಧದಲ್ಲಿದ್ದ ತನ್ನ ಪತಿಯನ್ನು ಮೋಡಿಗೊಳಪಡಿಸಿ ತನ್ನೊಂದಿಗೆ ರಮಿಸುವಂತೆ ಮಾಡುತ್ತಾಳೆ. ಇದರಿಂದಾಗಿ ಸುಧನ್ವ ತಂದೆಯ ಆಗ್ರಹಕ್ಕೆ ತುತ್ತಾಗಿ ಘೋರ ಶಿಕ್ಷೆಗೊಳಗಾಗಿ, ಕೊನೆಗೆ ತನ್ನ ಕೃಷ್ಣಭಕ್ತಿಯ ಮಹಿಮೆಯಿಂದಾಗಿ ಪಾರಾಗುತ್ತಾನೆ.	
(ವಿ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ